ರೇಷ್ಮೆ ಕೃಷಿಯು ಹಲವಾರು ಅಂಗ ಘಟಕಗಳನ್ನೊಳಗೊಂಡಿರುವ ಹಿನ್ನೆಲೆಯಿಂದಾಗಿ ಒಂದು ಸಂಕೀರ್ಣ ಉದ್ದಿಮೆ ಎಂದೇ ಪರಿಗಣಿತವಾಗಿದೆ. ಇವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ: ಮಣ್ಣಿನಿಂದ ಸೊಪ್ಪಿನ ಉತ್ಪಾದನೆವರೆಗಿನ ಕೃಷಿ ಘಟಕ. ಮೊಟ್ಟೆಯಿಂದ ಗೂಡಿನ ಉತ್ಪಾದನೆವರೆಗಿನ ಪ್ರಾಣಿ ಸಾಕಾಣಿಕಾ ಘಟಕ. ಗೂಡಿನಿಂದ ನೂಲು-ಬಟ್ಟೆ ಉತ್ಪಾದನೆವರೆಗಿನ ಔದ್ಯಮಿಕ ಘಟಕ. ಉದ್ದಿಮೆಯಲ್ಲಿ ಒದಗುವ ಹಲವಾರು ಉಪ ಉತ್ಪನ್ನಗಳ ಸದ್ಬಳಕೆಯಾದರೆ ಅದರಿಂದಾಗುವ ಮೌಲ್ಯ ಆದಾಯ ವೃದ್ಧಿಯಿಂದಾಗಿ ಬಹುಶಃ ರೇಷ್ಮೆ ಉದ್ದಿಮೆಯ ಆದಾಯ ಚಿತ್ರಣವೇ ಬದಲಾಗುವ ಸಾಧ್ಯತೆ ಇರುತ್ತದೆ. ರೇಷ್ಮೆ ಉದ್ದಿಮೆಯ ಪ್ರಮುಖ ಉಪ-ಉತ್ಪನ್ನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ: ಬಹುಶಃ ಆ ದೇಶದ ರೇಷ್ಮೆ ಉದ್ದಿಮೆಯ ಪ್ರತಿಯೊಂದು ಉಪಉತ್ಪನ್ನ, ವ್ಯರ್ಥ ಪದಾರ್ಥಗಳ ಅಳವಡಿಕೆಯನ್ನು ಅವಲೋಕಿಸಿದರೆ ನಂಬಲಸಾಧ್ಯವಾದ ಚಿತ್ರಣ ಎದುರಾಗಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದುವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ. ಹಿಪ್ಪುನೇರಳೆ ತೊಗಟೆಯಿಂದ ಕಾಗದ ತಯಾರಿಕೆ. ಕೋಶಗಳ ಆಹಾರ ರೂಪದ ಬಳಕೆ, ಎಣ್ಣೆ ಹಾಗೂ ಔಷಧಿ ತಯಾರಿಕೆ. ಚಿಟ್ಟೆಗಳಿಂದ ವೈನ್ ಹಾಗೂ ಔಷಧಿ ತಯಾರಿಕೆ. ಹಿಕ್ಕೆಗಳಿಂದ ಹಲವಾರು ಉತ್ಪನ್ನಗಳ ತಯಾರಿಕೆ. ಉದಾ: ಹರಿತ್ತು, ಸೋಡಿಯಂ ಕಾಪರ್ ಕ್ಲೋರೋಫಿಲಿನ್, ಪೆಕ್ಟಿನ್, ಫೈಟೋಲ್, ಕೆರೋಟಿನ್, ಟ್ರಯೋಕಾಂಟಾನಾಲ್ ಇತ್ಯಾದಿ ಔಷಧೀಯ, ಕೃಷಿ ಹಾಗೂ ಆಹಾರ ಬಳಕೆ ಪದಾರ್ಥಗಳು. == ಹಿಪ್ಪು ನೇರಳೆಯ ವಿವಿಧ ಭಾಗಗಳಿಂದ ಉಪಯೋಗಗಳು == ಹಿಪ್ಪುನೇರಳೆಯ ಸೊಪ್ಪು, ಹಣ್ಣು, ಉರುವಲು/ಕಟ್ಟಿಗೆ, ತೊಗಟೆ, ಕಡ್ಡಿ-ಕಾಂಡ-ಬೇರು ವಿವಿಧ ರೀತಿಯ ಉಪಯೋಗಗಳನ್ನು ಹೊಂದಿವೆ (ನೋಡಿ ಹಿಪ್ಪುನೇರಳೆ). == ಹುಳು ಸಾಕಣೆಯ ಕಸದಿಂದ ಕಾಂಪೋಸ್ಟ್ ಗೊಬ್ಬರ == ರೇಷ್ಮೆ ಹುಳು ಸಾಕಣೆಯಲ್ಲಿ ಒದಗಿಸಿದ ಸೊಪ್ಪು ಕಾಂಡಗಳ ಭಾಗಗಳು ಪೂರ್ತಿಯಾಗಿ ಸೇವನೆಯಾಗದೆ ಗಮನಾರ್ಹ ಪ್ರಮಾಣದಲ್ಲಿ ಉಳಿಕೆ ಕಸವು ಲಭ್ಯವಾಗುವುದು. ಒಂದು ಅಂದಾಜಿನ ಪ್ರಕಾರ ಪ್ರತಿ ನೂರು ಮೊಟ್ಟೆ ಹುಳು ಸಾಕಣೆಯಿಂದ ಅಂದಾಜು 100 ರಿಂದ 150 ಕಿ.ಗ್ರಾಂ. ಉಳಿಕೆ ಸೊಪ್ಪು, ಎಳೆ ಕಡ್ಡಿಗಳಲ್ಲದೆ ಸುಮಾರು 100-150 ಕಿ.ಗ್ರಾಂ. ಹಿಕ್ಕೆಯು ದೊರಕುತ್ತದೆ. ಇಂತಹ ಉಳಿಕೆ ಸೊಪ್ಪು ಕಡ್ಡಿಗಳನ್ನು ಹಾಗೂ ಹಿಕ್ಕೆಗಳನ್ನು ಸಾಮಾನ್ಯವಾಗಿ ದನದ ಮೇವಿಗಾಗಿ ಬಳಸಲಾಗುವುದಾದರೂ ಪರ್ಯಾಯವಾಗಿ ನೇರ ರೂಪದಲ್ಲಿ ಕಾಂಪೋಸ್ಟ್‌ಗಾಗಿ ಬಳಸಬಹುದಾಗಿದೆ. ಇಂತಹ ಕಸದಲ್ಲಿ ಪ್ರಮುಖ ಸಸ್ಯಕಾಂಶಗಳು ಗಮನಾರ್ಹ ಪ್ರಮಾಣದಲ್ಲಿದ್ದು (ಕೋಷ್ಟಕ) ಕಾಂಪೋಸ್ಟ್ ತಯಾರಿಕೆಗೆ ಬಳಸಿ ಅವುಗಳ ವ್ಯರ್ಥ ಸೋರಿಕೆಯನ್ನು ತಡೆಗಟ್ಟಬಹುದು. ಒಂದು ಎಕರೆ ತೋಟದಿಂದ ಅಂದಾಜು ವಾರ್ಷಿಕ 4 ಟನ್ ಸಾಕಾಣಿಕೆ ಕಸ ಹಾಗೂ 4-5 ಟನ್ ಎಳೆಯ ಕಡ್ಡಿ ಹಾಗೂ ಇತರೆ ವ್ಯರ್ಥ ಉಳಿಕೆ ಪದಾರ್ಥಗಳು ಲಭ್ಯವಿದ್ದು, ಅವುಗಳ ಬಳಕೆಗೆ ಮೇಲೆ ತಿಳಿಸಿದ ಗಾತ್ರದ ಮೂರು ಗುಂಡಿಗಳನ್ನು ಒಂದು ಎಕರೆ ತೋಟಕ್ಕೆ ಹೊಂದಬಹುದು. ಇದರಿಂದಾಗಿ ಅಂದಾಜು ವಾರ್ಷಿಕ 4 ಟನ್ ಕಾಂಪೋಸ್ಟ್ ಉತ್ಪಾದಿಸಬಹುದು. ರೇಷ್ಮೆ ಹುಳು ಸಾಕಣೆ ಕಸ ಹಾಗೂ ಹಿಕ್ಕೆಗಳನ್ನು ನೇರವಾಗಿ ಭೂಮಿಗೆ ಸೇರಿಸಬಹುದಾದರೂ ಅದು ಹೊಂದಿರಬಹುದಾದ ರೇಷ್ಮೆ ಹುಳುವಿನ ರೋಗಾಣುಗಳ ನಾಶಕ್ಕಾಗಿ ಕಾಂಪೋಸ್ಟ್ ಮಾಡುವುದು ಹೆಚ್ಚು ಸೂಕ್ತ. ಕಾಂಪೋಸ್ಟ್ ಪ್ರಕ್ರಿಯೆಯಲ್ಲಿ ಒದಗುವ 60-650C ನಷ್ಟು ಅಧಿಕ ಉಷ್ಣಾಂಶದಿಂದಾಗಿ ಇಂತಹ ರೋಗಾಣುಗಳು ನಾಶ ಹೊಂದುತ್ತದೆ. == ಹುಳು ಸಾಕಣೆ ಕಸದಿಂದ ಎರೆಹುಳುವಿನ ಗೊಬ್ಬರ == ಎರೆಹುಳುವಿನ ಸಮರ್ಥ ತಳಿಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಕೆಗಾಗಿ ಪ್ರಯತ್ನಿಸಲಾಗುತ್ತಿದೆ. ಹುಳು ಸಾಕಣೆ ಕಸವನ್ನು ಮೌಲ್ಯ ವೃದ್ಧಿಗಾಗಿ, ಎರೆಹುಳುವಿನ ಗೊಬ್ಬರ ತಯಾರಿಕೆಗಾಗಿ ಅಳವಡಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಕಾಂಪೋಸ್ಟ್ ತಯಾರಿಕೆಯ 4-5 ತಿಂಗಳ ಅವಧಿಯನ್ನು ಸುಮಾರು 2 ತಿಂಗಳಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಜೊತೆಗೆ ಈ ರೀತಿ ತಯಾರಿಸಿದ ಗೊಬ್ಬರವು ದುರ್ವಾಸನೆ ಹಾಗೂ ರೋಗಗಳಿಂದ ಮುಕ್ತವಾಗಿದ್ದು ಹಲವಾರು ಅನುಕೂಲಕರ ಸೂಕ್ಷ್ಮಾಣುಗಳನ್ನು ಹೊಂದಿರುವುದೇ ಅಲ್ಲದೆ ಹಲವಾರು ಸಸ್ಯ ಪೋಷಕಾಂಶಗಳ ಆಗರವಾಗಿದೆ. ಎರೆಹುಳುವು ತಾನು ಸೇವಿಸುವ ಆಹಾರದ ಕೇವಲ ಶೇಕಡ 10ರಷ್ಟು ಮಾತ್ರ ಜೀರ್ಣಿಸಿ ಉಳಿದ 90%ರಷ್ಟನ್ನು ಪರಿಪಾಕಿಸಿ, ಗುಣಾತ್ಮಕ ಮೌಲ್ಯ ವೃದ್ಧಿಯೊಂದಿಗೆ ಹಿಕ್ಕೆ ರೂಪದಲ್ಲಿ ಹೊರ ಚೆಲ್ಲುತ್ತದೆ. ಇಂತಹ ಹಿಕ್ಕೆಗಳು ಹಲವಾರು ಸಸ್ಯ ಪೋಷಕಾಂಶಗಳೊಂದಿಗೆ, ವಿಟಮಿನ್, ಕಿಣ್ವಗಳು ಹಾಗೂ ಹಲವು ರೋಗನಿರೋಧಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಎರೆಹುಳುವಿನ ಗೊಬ್ಬರವು ಹಲವಾರು ಪೋಷಕಾಂಶಗಳನ್ನು ಒದಗಿಸುತ್ತವೆ. ಇದನ್ನು ಎಕರೆ ಒಂದಕ್ಕೆ 2 ಟನ್ ಪ್ರಮಾಣದಲ್ಲಿ ಹಿಪ್ಪುನೇರಳೆ ತೋಟಕ್ಕೆ ಒದಗಿಸಬಹುದು. == ದನದ ಮೇವಿಗಾಗಿ ರೇಷ್ಮೆ ಹುಳುವಿನ ಹಿಕ್ಕೆ == ರೇಷ್ಮೆ ಹುಳುವು ಅಗಾಧವಾದ ದೇಹ ಬೆಳವಣಿಗೆ ಗತಿಯನ್ನು ಹೊಂದಿದೆ. ಚಾಕಿ ಒಡೆದು ಮರಿ ಆದಾಗಿನ ದೇಹ ತೂಕ 0.5 ಮಿ.ಗ್ರಾಂ.ನಿಂದ ಸುಮಾರು 25 ದಿನಗಳಲ್ಲಿ 10,000 ಪಟ್ಟು ಬೆಳೆದು ಸುಮಾರು 5 ಗ್ರಾಂವರೆಗೆ ತಲುಪುತ್ತದೆ. ಒಂದು ಹುಳುವು ಅಂದಾಜು 20 ಗ್ರಾಂ ಸೊಪ್ಪಿನ ಸೇವನೆ ಮಾಡಿ 4-5 ಗ್ರಾಂ ತೂಕ ಸಾಧನೆಗೈದು, ಸುಮಾರು 15 ಗ್ರಾಂ ಸೊಪ್ಪನ್ನು ವ್ಯರ್ಥಗೊಳಿಸಿ ದ್ರವ ಹಾಗೂ ಹಿಕ್ಕೆ ರೂಪದಲ್ಲಿ ದೇಹದಿಂದ ಹೊರಚೆಲ್ಲುತ್ತದೆ. ಒಂದು ಹುಳು ತನ್ನ ಜೀವಿತಾವಧಿಯಲ್ಲಿ ಅಂದಾಜು 10-12 ಗ್ರಾಂನಷ್ಟು ಹಿಕ್ಕೆಯನ್ನು ಒದಗಿಸುತ್ತದೆ. ಈ ರೀತಿ 100 ಮೊಟ್ಟೆ (40,000 ಹುಳುಗಳ ಸಾಕಣೆಯಿಂದ 400-500 ಕಿ.ಗ್ರಾಂ. ಹಿಕ್ಕೆ ಉತ್ಪಾದನೆ). ವಾರ್ಷಿಕ ಎಕರೆ ಒಂದಕ್ಕೆ ಒಂದು ಸಾವಿರ ಮೊಟ್ಟೆ ಸಾಕಣೆಯಿಂದ 4000-5000 ಕಿ.ಗ್ರಾಂ. (4-5 ಟನ್) ಹಿಕ್ಕೆ ಉತ್ಪಾದನೆ ಆಗುತ್ತದೆ. ಈ ರೀತಿ ಉತ್ಪಾದಿತ ಹಿಕ್ಕೆಯು ಸಾಮಾನ್ಯ ಮೇವಿಗಿಂತ ಅಧಿಕ ಪ್ರಮಾಣದ ಪ್ರೋಟೀನ್‌ನನ್ನು ಹೊಂದಿದೆ. ಈ ಗುಣಮಟ್ಟದಿಂದಾಗಿ ಹಿಕ್ಕೆಯನ್ನು ಹಸು, ಆಡು, ಕುರಿ, ಕೋಳಿ, ಹಂದಿ ಮುಂತಾದ ಪ್ರಾಣಿಗಳಿಗೆ ಮೇವಿನ ರೂಪದಲ್ಲಿ ಬಳಸಬಹುದು. == ಜೈವಿಕ ಅನಿಲ ಉತ್ಪಾದನೆಗಾಗಿ ರೇಷ್ಮೆ ಹುಳುವಿನ ಹಿಕ್ಕೆ == ರೇಷ್ಮೆ ಹುಳುವಿನ ಹಿಕ್ಕೆಯನ್ನು ಮಾಡಿ ಜೈವಿಕ ಅನಿಲ ಉತ್ಪಾದನೆ ಸಾಧ್ಯವಿದೆ. ಜೈವಿಕ ಅನಿಲ ಉತ್ಪಾದನೆಯಲ್ಲಿ ವಿವಿಧ ಅನುಕೂಲಕರ ಗುಂಪಿನ ಸೂಕ್ಷ್ಮ ಜೀವಾಣುಗಳ ಅಳವಡಿಕೆಯಿಂದ ಸಾವಯವ ಪದಾರ್ಥಗಳ ಕಳಿಕೆ/ಪರಿಷ್ಕರಣೆಯನ್ನು ನಿಯೋಜಿತ ವ್ಯವಸ್ಥೆಯಲ್ಲಿ ನಿಯೋಜಿಸಿ ಹಂತ-ಹಂತವಾಗಿ ಮಿಥೇನ್ ಹಾಗೂ ಇಂಗಾಲದ ಡೈ ಆಕ್ಸೈಡ್‌ನ ಮಿಶ್ರಣದ ಉತ್ಪಾದನೆಯನ್ನು ಪಡೆಯುವುದು ಸಾಧ್ಯ. ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನೆಗಾಗಿ ಸಗಣಿಗೆ ಪರ್ಯಾಯವಾಗಿ ಅಷ್ಟೇ ಸಮರ್ಥವಾಗಿ ಬಳಸಬಹುದು. ಸಗಣಿ ಇತ್ಯಾದಿ ಸಾಮಾನ್ಯ ಬಳಕೆಯ ಕಚ್ಚಾ ವಸ್ತುವಿನೊಂದಿಗೆ ಹಿಕ್ಕೆಯನ್ನು ಮಿಶ್ರಣ ರೂಪದಲ್ಲಿ ಬಳಸಿದ ಅನಿಲ ಉತ್ಪಾದನೆಯನ್ನು ಒಂದೂವರೆಯಿಂದ ಎರಡು ಪಟ್ಟು ವೃದ್ಧಿಸಬಹುದು. ಗುಣಾತ್ಮಕವಾಗಿ ಕೇವಲ ಹಿಕ್ಕೆಯ ಅಳವಡಿಕೆಯಿಂದ ಸಗಣಿಯ ಅಳವಡಿಕೆಗೆ ಹೋಲಿಸಿದರೆ ಅರ್ಧದಷ್ಟು ಅಧಿಕ ಅನಿಲ ಉತ್ಪಾದನೆಯನ್ನು ಸಾಧಿಸಬಹುದಾದರೂ, ಹಿಕ್ಕೆ ಒಂದರಿಂದಲೇ ಸಮರ್ಥ ನಿರ್ವಹಣೆ ಸಾಧ್ಯವಾಗದು, ಯಾಕೆಂದರೆ ಅವಶ್ಯಕ ಪ್ರಮಾಣದ ಹಿಕ್ಕೆ ದೊರಕಲಾರದು. ಈ ಮೇಲಿನ ಅಂಶದ ಹಿನ್ನೆಲೆಯಿಂದಾಗಿ ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನಾ ಘಟಕಗಳಲ್ಲಿ ಪೂರ್ಣ ಪ್ರಮಾಣದ ಸಾಮಗ್ರಿಯಾಗಿ ಬಳಸಲಾರದೆ, ಪರ್ಯಾಯ ಅಥವಾ ಪೂರಕ ಸಾಮಗ್ರಿಯಾಗಿ ಅಳವಡಿಸಬಹುದು. ಅನಿಲ ಉತ್ಪಾದನಾ ಘಟಕದಲ್ಲಿನ ವಾತಾವರಣವು ಹಿಪ್ಪುನೇರಳೆ ಹಾಗೂ ಹುಳುಗಳಿಗೆ ಪೂರಕ ರೋಗಾಣುಗಳಿಗೆ ಅನುಕೂಲಕರವಿಲ್ಲದ್ದರಿಂದ, ಅದರಿಂದೊದಗುವ ಗಂಜಲು, ರೋಗ ನಿರ್ವಹಣಾ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರ. ಈ ರೀತಿ ರೇಷ್ಮೆ ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನಾ ಘಟಕಗಳಲ್ಲಿ ಅಳವಡಿಸಿ, ಪೋಷಕಾಂಶಗಳ ಲಭ್ಯತೆಯ ವೃದ್ಧಿಯ ಜೊತೆಗೆ, ಸಾವಯವ ಗೊಬ್ಬರ ನಿರ್ವಹಣೆಯ ಸಮರ್ಥತೆಯನ್ನು ವೃದ್ಧಿಸಿ, ಗೂಡಿನ ಇಳುವರಿ, ಉತ್ಪಾದಕತೆಗಳ ಸುಧಾರಣೆಯನ್ನು ಸಾಧಿಸಿ, ಒಟ್ಟಾರೆ ರೇಷ್ಮೆ ಕೃಷಿಯಲ್ಲಿ ಮೌಲ್ಯ ವೃದ್ಧಿಗೆ ಅನುವು ಮಾಡಿದಂತಾಗುವುದು. == ರೇಷ್ಮೆ ಹುಳುವಿನ ಔಷಧೀಯ ಗುಣಧರ್ಮಗಳು == ಪ್ರಾಣಿ ಪ್ರಪಂಚದಲ್ಲಿ ರೇಷ್ಮೆ ಹುಳುವು ಹಲವಾರು ಕಾರಣಗಳಿಂದ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಬಹಳ ಪ್ರಮುಖವಾಗಿ ಅದರ ದೇಹ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸಾರಜನಕ ಸಂಬಂಧಿತ, ಅಮೈನೊ ಆಮ್ಲಗಳು, ಪ್ರೋಟೀನ್ ಪದಾರ್ಥಗಳ, ಅದಕ್ಕೆ ಸಂಬಂಧಿತ ಹಲವಾರು ಜೀವ ರಾಸಾಯನಿಕಗಳ ಪರಿವರ್ತನೆ, ತಯಾರಿಕೆ ನಡೆದಿರುತ್ತದೆ. ಇಂತಹ ಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುವ ಹಲವು ಮಧ್ಯಂತರ ರಾಸಾಯನಿಕಗಳ ಲಭ್ಯತೆಯಿಂದಾಗಿ ವಿಶಿಷ್ಟ ಹೆಚ್ಚುವರಿ ಉಪಯೋಗಗಳನ್ನು ಪಡೆಯುವುದೂ ಕೂಡ ಸಾಧ್ಯವಾಗಿದೆ. ರೇಷ್ಮೆ ಹುಳುವಿನಿಂದ ಹಲವು ಸಾಧ್ಯ ಔಷಧೀಯ ಉಪಯೋಗಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಲಭ್ಯವಿದ್ದು ವಿಶೇಷವಾಗಿ ಚೈನಾ ದೇಶದಲ್ಲಿ ಇದರ ಬಗೆಗಿನ ಅಧಿಕ ಬಳಕೆಯಿರುವುದು ಕಂಡು ಬರುತ್ತದೆ. ಆರೋಗ್ಯಕರ ಹುಳುಗಳನ್ನು ಸೋಂಕು ರಹಿತ ವ್ಯವಸ್ಥೆಯಲ್ಲಿ ಒಣಗಿಸಿ ವಾಣಿಜ್ಯಿಕ ಮಟ್ಟದಲ್ಲಿ ಚೈನಾ, ಜಪಾನ್, ಕೊರಿಯ, ಹಾಂಗ್‌ಕಾಂಗ್‌ಗಳಲ್ಲಿ ಆಹಾರಕ್ಕೆಂದು ಮಾರಾಟ ಮಾಡಲಾಗುತ್ತಿದೆ. ಅದನ್ನು ಪುಡಿ ಮಾಡಿ ಸೂಪು, ಸಾಸು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಗೂ ಇತರ ಪ್ರಾಣಿ ಆಹಾರದ ರೂಪದಲ್ಲೂ ಬಳಕೆ ಇದೆ. ಹುಳುವಿನ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುವುದರಿಂದ ಅದನ್ನು ವಿಶೇಷವಾಗಿ ಹೃದ್ರೋಗಿ ಹಾಗೂ ಸಕ್ಕರೆ ಪೀಡಿತರಿಗೆ ಆಹಾರದಲ್ಲಿ ಬಳಸಲಾಗುತ್ತಿದೆ. ಸುಣ್ಣಕಟ್ಟು ರೋಗ ಪೀಡಿತ ಹುಳುಗಳನ್ನು ಬಳಸಿ ತಯಾರಿಸಿದ ಕಷಾಯ ಶ್ವಾಸನಾಶ ಪೀಡಿತ ಅಸ್ತಮಾ ರೋಗಿಗಳಿಗೆ ಹಾಗೂ ಇತರೆ ಹಲವು ರೋಗ ನಿವಾರಣೆಗೆ ಬಳಕೆ ಇದೆ. ಹುಳುಗಳಿಂದ ತಯಾರಿಸಿದ ಕಷಾಯವನ್ನಳವಡಿಸಿ ಮೊಡವೆ ಪೀಡೆ ನಿವಾರಣೆಗೆ ವಿಶೇಷ ಕ್ರೀಮ್‌ನ ತಯಾರಿಕೆ ಇದೆ. ಹುಳುವಿನ ಕೋಶವು ಹೊಂದಿದ ಅಧಿಕ ಪ್ರಮಾಣದ ಪ್ರೋಟಿನ್, ಕೊಬ್ಬು, ಲೈಪೀನ್, ಮಿಥಿಯೋನಿನ್‌ನಂತಹ ಅಮೈನೋ ಆಮ್ಲಗಳಿಂದಾಗಿ ತಯಾರಿಸಲ್ಪಟ್ಟ ಆಹಾರಕ್ಕೆ ವಿಶೇಷ ಔಷಧೀಯ ಮಹತ್ವವಿದೆ. ಹುಳುವಿನ ಕೋಶವು ಹೊಂದಿದ ಅಧಿಕ ವಿಟಮಿನ್ ಬಿ1, ಬಿ2 ಹಾಗೂ ವಿಟಮಿನ್ ಇ ಗಳಿಂದಾಗಿ ಔಷಧಿ ಬಳಕೆಗೆ, ಎಣ್ಣೆಯ ಉತ್ಪಾದನೆಗೆ ಬಳಸಲಾಗುತ್ತಿದೆ. ಹುಳುವಿನ ಕೋಶದ ಎಣ್ಣೆಯನ್ನು ವಿಶೇಷವಾಗಿ ಯಕೃತ್, ರಕ್ತ ಸಂಬಂಧಿತ ಕಾಯಿಲೆಗೆ ಬಳಸಲಾಗುತ್ತಿದೆ. ರೇಷ್ಮೆ ಹುಳುವಿನ ಚಿಟ್ಟೆಯಿಂದ ಬಹು ಉಪಯೋಗಿ ವೈನ್ ಹಾಗೂ ಔಷಧಿಗಳನ್ನು ತಯಾರಿಸಲಾಗುತ್ತಿದೆ. ಗಂಡು ಚಿಟ್ಟೆಯಿಂದ ತಯಾರಿಸಲಾದ ಔಷಧಿಯನ್ನು ವಿಶೇಷವಾಗಿ ಸಂತಾನೋತ್ಪತ್ತಿ ಶಕ್ತಿ ಹೀನತೆಯ ಉಪಚಾರಕ್ಕೆ ಬಳಸಲಾಗುತ್ತಿದೆ. ಹುಳುವಿನ ಹಿಕ್ಕೆಯಿಂದ ಹರಿತ್ತು, ಫೈಟಾಲ್, ಪೆಕ್ವಿನ್, ಕೆರೋಟಿನ್, ಟ್ರೈಕಾಂಟೆನಾಲ್ ಇತ್ಯಾದಿ ಹಲವು ಪದಾರ್ಥಗಳನ್ನು ತಯಾರಿಸಿ ಔಷಧಿಯ ಉದ್ದಿಮೆಯಲ್ಲಿ ವಿಪುಲವಾಗಿ ಬಳಸಲಾಗುತ್ತಿದೆ. ಇವುಗಳಿಂದ ವಿಶೇಷವಾಗಿ ಜಠರ ಸಂಬಂಧಿತ ಅಲ್ಸರ್, ಹೆಪಟೈಟಿಸ್ ನಿವಾರಣೆಗಾಗಿ ಔಷಧಿಗಳನ್ನು ತಯಾರಿಸಲಾಗುತ್ತಿದೆ. ಹುಳುವಿನ ಹಿಕ್ಕೆಯಿಂದ ಉತ್ಪಾದಿತ ಹರಿತ್ತಿನ ತಯಾರಿಕೆಯನ್ನು ವಿಶೇಷ ಸೌಂದರ್ಯವರ್ಧಕ ಲೇಪನ, ಕ್ರೀಮ್ ಇತ್ಯಾದಿಗಳಲ್ಲಿ ಬಳಸಲಾಗುತ್ತಿದೆ. ನೂಲು ಬಿಚ್ಚಾಣಿಕೆಯಲ್ಲಿ ಒದಗುವ ಕೊನೆಯ ಪದರು ಪಿಲಾಡ್ ಅನ್ನು ಅಳವಡಿಸಿದ ಆಹಾರ ಸೇವನೆ ವಿಶೇಷವಾಗಿ ರಕ್ತ ಸಕ್ಕರೆ ಹಾಗೂ ಕೊಲೆಸ್ಟ್ರಾಲ್‌ನ ಹತೋಟಿಗೆ ಪರಿಣಾಮಕಾರಿಯಾಗಿದೆ. ರೇಷ್ಮೆಯಿಂದ ತಯಾರಿಸಿದ ಪೊರೆಯನ್ನು ಕೃತಕ ಚರ್ಮ, ರಕ್ತನಾಳ ಹಾಗೂ ಶಸ್ತ್ರಚಿಕಿತ್ಸೆಗಳಲ್ಲೂ ಬಳಸಲಾಗುತ್ತಿದೆ. == ಡಬಲ್ ಗೂಡಿನಿಂದ ಡೂಪಿಯನ್ ರೇಷ್ಮೆ == ಹಣ್ಣಾದ ರೇಷ್ಮೆ ಹುಳುಗಳನ್ನು ಗೂಡು ಕಟ್ಟಲೆಂದು ಚಂದ್ರಿಕೆಗೆ ಬಿಟ್ಟಾಗ, ಸ್ಥಳಾವಕಾಶ ಅಭಾವದಿಂದ, ಎರಡನೆಯ ಹುಳುಗಳು ಒಟ್ಟಿಗೆ ಸೇರಿ ಒಂದು ಗೂಡನ್ನು ರಚಿಸುತ್ತದೆ. ಈ ರೀತಿಯ ಗೂಡುಗಳಲ್ಲಿ ಎರಡು ಹುಳುಗಳು ಒಟ್ಟಾರೆಯಾಗಿ ದಾರದೆಳೆಯನ್ನು ಬಿಟ್ಟು ಉತ್ಪಾದನೆ ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದಾಗಿ ಅವೆರಡು ದಾರದೆಳೆಗಳು ಒಟ್ಟಿಗೆ ಸೇರಿಕೊಂಡಿರುವುದರಿಂದ ನೂಲು ಬಿಚ್ಚಾಣಿಕೆಯಲ್ಲಿ ಸಲೀಸಾಗಿ ಬಿಡಿಸಲು ಸಾಧ್ಯವಾಗದೇ, ಹಂತ ಹಂತಗಳಲ್ಲಿ ಗುಂಪು ಗುಂಪಾಗಿ ಎಳೆಗಳು ಬಿಚ್ಚಿಕೊಂಡು, ಉತ್ಪಾದಿತ ದಾರವು ಸಮಾನತೆಯನ್ನು ಕಳೆದುಕೊಳ್ಳುತ್ತದೆ. ಈ ರೀತಿ ಸಮಾನತೆಯನ್ನು ಹೊಂದಿರದ, ಗಂಟುಗಂಟಾಗಿ, ಗುಂಪು ಗುಂಪಾಗಿರುವ ಭೌತಿಕ ಗುಣ ಧರ್ಮಗಳನ್ನು ಹೊಂದಿದ ರೇಷ್ಮೆ ದಾರವೇ “ಡೂಪಿಯನ್ ರೇಷ್ಮೆ”. ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದನೆಗೆ ಸಮಾನ ಭೌತಿಕ ಗುಣಧರ್ಮಗಳನ್ನು ಅತ್ಯಂತ ಹೆಚ್ಚು ಉದ್ದದ ದಾರವು ಹೊಂದಿರಬೇಕೆಂಬುದು ಕಟು ಸತ್ಯ. ಇದಕ್ಕೆ ವ್ಯತಿರಿಕ್ತವಾಗಿ ಸಮಾನತೆ, ಅಪೇಕ್ಷಿತ ಗುಣಧರ್ಮಗಳನ್ನು ಹೊಂದಿರದ, ಭೌತಿಕ ವ್ಯತ್ಯಾಸಗಳನ್ನು ತನ್ನದೇ ಆದ ವಿಶಿಷ್ಟ ಕ್ರಮರಹಿತ ವೈವಿಧ್ಯದಿಂದಾಗಿ ಡೂಪಿಯನ್ ರೇಷ್ಮೆಯು ಹಲವಾರು ಬಳಕೆ ಮೌಲ್ಯವನ್ನು ಹೊಂದಿದೆ. ಇದೇ ಕಾರಣಗಳಿಂದಾಗಿ ತನ್ನದೇ ಆದ ವಿಶಿಷ್ಟ ಮಾರುಕಟ್ಟೆ ಬೇಡಿಕೆಯನ್ನು ಹೊಂದಿದೆ. ಡೂಪಿಯನ್ ರೇಷ್ಮೆಯ ಬೇಡಿಕೆಯು ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಧಾನಕರ, ಉತ್ತೇಜನ ಪೂರಕ ಬೆಲೆಯನ್ನು ಪಡೆಯುತ್ತಿದೆ. ಈ ರೀತಿಯ ಬೇಡಿಕೆಯಿಂದ ಕೆಲವು ನೂಲು ಬಿಚ್ಚಾಣಿಕೆದಾರರು ಒಳ್ಳೆಯ ಗೂಡುಗಳನ್ನು ಅಳವಡಿಸಿ ಡೂಪಿಯನ್ ರೇಷ್ಮೆಯನ್ನು ಉತ್ಪಾದಿಸುತ್ತಾರೆ. ಡೂಪಿಯನ್ ರೇಷ್ಮೆಯಿಂದ ಉತ್ಪಾದಿತ ಒರಟು ಬಟ್ಟೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚುತ್ತಿದ್ದು ವಿಶಿಷ್ಟವಾಗಿ ಹಾಸಿಗೆ ಹೊದಿಕೆ, ತಲೆದಿಂಬು, ಕಿಟಕಿ-ಬಾಗಿಲು ಪರದೆ, ಸೀರೆ, ಶರ್ಟು ಬಟ್ಟೆ ಮುಂತಾದವುಗಳಿಗೆ ಉಪಯೋಗಿಸಲಾಗುತ್ತಿದೆ. ಡೂಪಿಯನ್ ಉತ್ಪಾದನೆಗೆ ಸಂಬಂಧಿತ ಅಂಕಿ-ಅಂಶಗಳನ್ನು ಕೋಷ್ಟಕದಲ್ಲಿ ಕೊಡಲಾಗಿದೆ. == ಕತ್ತರಿಸಿದ ಮತ್ತು ಚಿಟ್ಟೆ ಕೊರೆದ ಗೂಡಿನಿಂದ ಮಟ್ಕ ರೇಷ್ಮೆ ಉತ್ಪಾದನೆ == ಮೊಟ್ಟೆ ಉತ್ಪಾದನೆಯು ರೇಷ್ಮೆ ಉತ್ಪಾದನೆ ಉದ್ದಿಮೆಯ ಅವಿಭಾಜ್ಯ ಅಂಗವೆಂಬುದಕ್ಕೆ ಎರಡು ಮಾತಿರಲಾರದು. ಮೊಟ್ಟೆ ಉತ್ಪಾದನೆಗೆ ಅವಶ್ಯಕ ಗಂಡು-ಹೆಣ್ಣು ಚಿಟ್ಟೆಗಳನ್ನು ಪಡೆಯಲು ಆಯ್ದ ತಳಿಗಳ ಗಂಡು ಹೆಣ್ಣು ಕೋಶಗಳನ್ನು ಹೊಂದಿದ ಬಿತ್ತನೆ ಗೂಡುಗಳು ಅವಶ್ಯಕ. ನಿಗದಿತ ತಳಿಗಳ ಗಂಡು ಹೆಣ್ಣು ಚಿಟ್ಟೆಗಳ ಆಯ್ಕೆಗೆ ಆಯಾ ಲಿಂಗದ ಗೂಡುಗಳನ್ನು ಬೇರ್ಪಡಿಸಬೇಕು. ಈ ರೀತಿಯ ವಿಂಗಡಣೆಗೆ ಗೂಡುಗಳನ್ನು ಕತ್ತರಿಸುವುದು ಅನಿವಾರ್ಯ. ಕೋಶ (ಪ್ಯೂಪ)ಗಳ ಆಯ್ಕೆಯ ನಂತರ ದೊರಕುವ ರೇಷ್ಮೆ ಗೂಡಿನ ಕವಚವು ಬೃಹತ್ ಪ್ರಮಾಣದಲ್ಲಿ ಲಭ್ಯ. ಇದೇ ರೀತಿ ಕತ್ತರಿಸದೇ ಬಿಟ್ಟ ಗೂಡುಗಳಿಂದ ಚಿಟ್ಟೆಗಳು ನೈಸರ್ಗಿಕವಾಗಿ ಗೂಡನ್ನು ಕೊರೆದು ಹೊರಬರುತ್ತವೆ. ಇಂತಹ ಚಿಟ್ಟೆ ಕೊರೆದ ಹಾಗೂ ಕತ್ತರಿಸದ ಗೂಡುಗಳಿಂದ ಸಾಮಾನ್ಯ ನೂಲು ಬಿಚ್ಚಾಣಿಕೆ ಅಸಾಧ್ಯ. == ಊಜಿ ಕೊರೆದ ಗೂಡಿನಿಂದ ನೂಲು ಬಿಚ್ಚಾಣಿಕೆ == ರೇಷ್ಮೆ ಉದ್ದಿಮೆಗೆ ಪ್ರಪಂಚದಾದ್ಯಂತ ಬಾಧಿಸುವ ಊಜಿ ನೊಣ ಎಂಬ ಕೀಟವಿದೆ. ಕರ್ನಾಟಕದಲ್ಲಿ ಇದರ ಹಾವಳಿ ಇತ್ತೀಚಿನದೆಂದೇ ಹೇಳಬಹುದು. ಒಂದು ನೊಣವು ರೇಷ್ಮೆ ಹುಳುವಿನ ಮೇಲೆ, ಪ್ರತಿ ಹುಳುವಿಗೆ 1-2 ಮೊಟ್ಟೆಗಳಂತೆ ಸುಮಾರು 200-300 ಹುಳುಗಳಿಗೆ ಬಾಧಿಸಿ, ಸಾಯಿಸಿ ಇಲ್ಲವೇ ಗೂಡಿನ ಹಂತದಲ್ಲಿ ಅಂದರೆ ಮ್ಯಾಗಟ್ ಹುಳು ಹಂತದಲ್ಲಿ ಗೂಡು ಕೊರೆದು ಆಚೆ ಬಂದು ಹಾನಿಯನ್ನುಂಟುಮಾಡಬಲ್ಲದು. ಅಂದರೆ ಕೇವಲ ಒಂದು ಊಜಿ ನೊಣವು ಅಂದಾಜು ಅರ್ಧ ಕಿ.ಗ್ರಾಂ. ಗೂಡಿನ ಉತ್ಪಾದನೆಗೆ ಇಲ್ಲವೇ ಗೂಡಿಗೆ ಹಾನಿಕಾರಕವಾಗಬಲ್ಲುದು. ಈ ರೀತಿ ಊಜಿ ಪೀಡಿತ ಗೂಡುಗಳನ್ನು ಸಾಮಾನ್ಯವಾಗಿ ಗೂಡು ಉತ್ಪಾದಕರು ಹಾಗೂ ನೂಲು ಬಿಚ್ಚಾಣಿಕೆದಾರರು ವ್ಯರ್ಥ ಅಥವಾ ಕಳಪೆ ಗೂಡಿನೊಂದಿಗೆ ಬೆರೆಸಿ ಕಡಿಮೆ ಬೆಲೆಗೆ ಮಾರಾಟ ಮಾಡುವುದುಂಟು. ಸಾಮಾನ್ಯ ತಿಳುವಳಿಕೆಗೆ ವ್ಯತಿರಿಕ್ತವಾಗಿ ಊಜಿ ಮ್ಯಾಗಟ್ ಹುಳುವು ಕೋಶವನ್ನು ಕಡಿದು, ದಾರದೆಳೆಯನ್ನು ಕಟಾಯಿಸದೇ, ಅದನ್ನು ಬೇರ್ಪಡಿಸಿ ಆಚೆ ಬರಲು ಅನುವು ಮಾಡಿಕೊಂಡು ಹೊರಬರುವುದರಿಂದಾಗಿ ರೇಷ್ಮೆ ಗೂಡಿನ ಕೋಶವು ಕತ್ತರಿಸಲ್ಪಟ್ಟಿರುವುದಿಲ್ಲ. ಆದ್ದರಿಂದ ಅದನ್ನು ವಿಶೇಷ ಪರಿಣತಿಯನ್ನನ್ನುಸರಿಸಿ, ಭಾಗಶಃ ದಾರದೆಳೆಯನ್ನು ಬಿಚ್ಚಲು ಉಪಯೋಗಿಸಬಹುದಾಗಿದೆ. == ಸ್ಪನ್ ರೇಷ್ಮೆ (ಹಿಂಜು) ದಾರ ಉತ್ಪಾದನೆ == ಮೊಟ್ಟೆ ಉತ್ಪಾದನಾ ಘಟಕದಿಂದ ಚಿಟ್ಟೆ ಕೊರೆದ ಹಾಗೂ ಕತ್ತರಿಸಲ್ಪಟ್ಟ ಗೂಡಿನ ಕೋಶಗಳು. ನೂಲು ಬಿಚ್ಚಾಣಿಕೆ ಪ್ರಕ್ರಿಯೆಯಲ್ಲಿ ದೊರಕುವ ವ್ಯರ್ಥ ರೇಷ್ಮೆ ಮತ್ತು ಬಟ್ಟೆ ತಯಾರಿಕಾ ಹಂತದ ವ್ಯರ್ಥ ರೇಷ್ಮೆ. ಇಂತಹ ಗೂಡು ಹಾಗೂ ಇತರೆ ಕಚ್ಚಾ ಪದಾರ್ಥವು ಸಾಮಾನ್ಯವಾಗಿ ಕಳಪೆ ಎಂದು ಪರಿಗಣಿಸಲ್ಪಡುತ್ತಿದ್ದುದರಿಂದ ಅತಿ ಅಗ್ಗದ ಬೆಲೆಗೆ ಲಭ್ಯವಿದ್ದು ಇದರ ಮೌಲ್ಯ ವೃದ್ಧಿ ಪ್ರಕ್ರಿಯೆಯನ್ನಳವಡಿಸುವುದು ಅವಶ್ಯಕ. ಜೊತೆಗೆ ಇದರಿಂದ ಉತ್ಪಾದಿತ ಸ್ಪನ್ ರೇಷ್ಮೆ ದಾರವು, ಸಾಮಾನ್ಯ ನೂಲು ಬಿಚ್ಚಾಣಿಕೆಯಿಂದೊದಗುವ ದಾರಕ್ಕೆ ಹೋಲಿಸಿದರೆ ಕಡಿಮೆ ಹೊಳಪನ್ನು ಹೊಂದಿದ್ದು, ಹೆಚ್ಚಿನ ಗಾತ್ರ ಹಾಗೂ ಗಾತ್ರದ ಅಸಮಾನತೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಂಡಿದ್ದು, ಅದಕ್ಕೆ ಅದರದೇ ವಿಶೇಷತೆಗಳಿವೆ. ಇಂತಹ ವಿಶೇಷತೆಗಳನ್ನು ಉಪಯೋಗಿಸಿ, ವಿಶಿಷ್ಟ ಬಳಕೆಯ ಬಟ್ಟೆ ಉತ್ಪಾದನೆ ಕೈಗೊಳ್ಳಬಹುದಾಗಿದೆ. ಇದರಲ್ಲಿ ಬಹಳ ಪ್ರಮುಖವಾಗಿ ರತ್ನಗಂಬಳಿ ಮುಂತಾದ ಕಾರ್ಪೆಟ್ ಆಧಾರಿತ ಉತ್ಪನ್ನಗಳೇ ಅಧಿಕ ಹಾಗೂ ಅತ್ಯಧಿಕ ಮೌಲ್ಯವರ್ಧಿತ ಉತ್ಪನ್ನಗಳಾಗಿವೆ. ಜೊತೆಗೆ ಇಂತಹ ಬಟ್ಟೆಗಳಿಂದ ಉತ್ಪಾದಿತ ಹಾಸಿಗೆ, ದಿಂಬು-ಹೊದಿಕೆ, ಕಿಟಕಿ-ಬಾಗಿಲು ಪರದೆ, ಶರ್ಟು, ಸೀರೆ ಮತ್ತು ಇತರೆ ಬಟ್ಟೆಗಳಿಗೂ ಅತ್ಯಧಿಕ ಬೇಡಿಕೆ ಇದೆ. ಸ್ಪನ್ ದಾರದ ಉತ್ಪಾದನೆಯು ಸಂಘಟಿತ ರೂಪದ ಕಾರ್ಖಾನೆಗಳಲ್ಲೂ, ಜೊತೆಗೆ ಸಣ್ಣಪ್ರಮಾಣದ ಅಸಂಘಟಿತ ಮಾನವ ಚಾಲಿತ ತಕಲಿ, ಚರಕ ಮುಂತಾದ ಘಟಕಗಳಿಂದಲೂ ಒರಟು ರೂಪದ ದಾರ ಉತ್ಪಾದನೆ ಆಗುತ್ತಿದೆ. ರೇಷ್ಮೆ ಸ್ಪನ್ ದಾರದ ಉತ್ಪಾದನೆಯು, ಇಂತಹ ಕಡಿತ ದಾರಗಳಾದ, ಉಣ್ಣೆ, ಹತ್ತಿ ಇತ್ಯಾದಿಗಳಂತೆಯೇ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಅಂತೆಯೇ ಒಳಗೊಂಡ ಪ್ರಮುಖ ಪ್ರಕ್ರಿಯೆಗಳೆಂದರೆ: ಅಂಟು ಬೇರ್ಪಡಿಸುವಿಕೆ ನಿರ್ವರ್ಣಗೊಳಿಸುವಿಕೆ ವ್ಯವಸ್ಥಿತ ಅನುಕರಣಿಕೆ ಬಿಚ್ಚುವಿಕೆ ಹಿಂಜುವಿಕೆ ಎಳೆಯುವಿಕೆ ಹೊಸಿಯುವಿಕೆ ಉಗಿ-ಪರಿಚಾರಿಕೆ ಬಣ್ಣ ಹಾಕುವಿಕೆ ಒಪ್ಪಗೊಳಿಸುವಿಕೆ/ಮೆರಗುಗೊಳಿಸುವಿಕೆ ಈವರೆಗೆ ಕೇವಲ ಸರ್ಕಾರಿ ಸ್ವಾಮ್ಯದಲ್ಲಿದ್ದ ಸ್ಪನ್ ದಾರದ ಉದ್ದಿಮೆಯು ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಉದ್ದಿಮೆ ದಾರವನ್ನು ಆಕರ್ಷಿಸುತ್ತಲಿದ್ದು, ಆಕರ್ಷಕ ಭವಿಷ್ಯವನ್ನು ಹೊಂದಿದೆ. ಭಾರತದಲ್ಲಿ ವಾರ್ಷಿಕ ಸುಮಾರು 4,500 ಮೆ-ಟನ್ ವ್ಯರ್ಥ ರೇಷ್ಮೆ, 600 ಟನ್ ವ್ಯರ್ಥ ಗೂಡುಗಳ ಲಭ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ವ್ಯರ್ಥ ರೇಷ್ಮೆಯ ಬಳಕೆಗಾಗಿ ದೇಶದಲ್ಲಿ ಸುಮಾರು 20 ಸ್ಪನ್ ರೇಷ್ಮೆ ಉತ್ಪಾದನಾ ಕಾರ್ಖಾನೆಗಳಿವೆ. == ನೂಲು ಬಿಚ್ಚಾಣಿಕೆ ಬೇಸಿನ್ ಮೂಲದ ವ್ಯರ್ಥ ಉತ್ಪನ್ನ == ದೇಶದ ರೇಷ್ಮೆ ಉತ್ಪಾದನೆಯಾದ ಸುಮಾರು 15,000 ಮೆ.ಟನ್‌ನಲ್ಲಿ ಕರ್ನಾಟಕ ಒಂದರಲ್ಲೇ ಸುಮಾರು 9000 ಟನ್ ರೇಷ್ಮೆ ಉತ್ಪಾದನೆಗಾಗಿ ಅಂದಾಜು ವಾರ್ಷಿಕ 80,000 ಮೆ.ಟನ್ ಗೂಡಿನ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ವ್ಯರ್ಥ ಉತ್ಪನ್ನವಾದ ಸುಮಾರು 65,000-70,000 ಮೆ.ಟನ್ ಪ್ಯೂಪ ಅಂದರೆ ಗೂಡು-ಕೋಶವನ್ನು ಹೊಂದಿದೆ. ವಾರ್ಷಿಕ ನಮ್ಮ ದೇಶದಲ್ಲಿ 45,000 ಮೆ.ಟನ್ ಒಣ ಪ್ಯೂಪ ಉತ್ಪಾದನೆ ಆಗುತ್ತಿದೆ. ರೇಷ್ಮೆ ನೂಲಿಗೆ 8-9 ಕಿ.ಗ್ರಾಂ ಕೋಶ (ಪ್ಯೂಪ) ಅಂದರೆ ಸುಮಾರು 3 ಕಿ.ಗ್ರಾಂ ಒಣ ಪ್ಯೂಪ ಒದಗುತ್ತದೆ. ಒಣಗಿದ ಕೋಶದಲ್ಲಿ ಶೇ.25ರಷ್ಟು ಕೊಬ್ಬು ಹಾಗೂ ಶೇ.50ರಷ್ಟು ಪ್ರೋಟೀನ್ ಇರುತ್ತದೆ. ಜೊತೆಗೆ ಗಮನಾರ್ಹ ಪ್ರಮಾಣದ ಗಂಧಕ, ಸುಣ್ಣ ಹಾಗೂ ವಿಟಮಿನ್‌ಗಳೊಂದಿಗೆ, ಶೇಕಡ 5 ರಷ್ಟು ಬೂದಿ ಪೂರಕ ಅಂಶವನ್ನು ಹೊಂದಿರುತ್ತದೆ. ಇದರಿಂದಾಗಿ ಸ್ವಚ್ಛಗೊಳಿಸಿದ, ಸಮರ್ಥ ಶೇಖರಣೆಗೊಳಗೊಂಡ ಕೋಶದಿಂದ ಸಾಬೂನು ತಯಾರಿಕೆಗಾಗಿ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಸಮರ್ಥ ಶೇಖರಣೆಗೊಳಪಡದಿರುವ ಕೋಶದ-ಕೊಳೆಯುವಿಕೆಯಿಂದಾಗಿ, ಉತ್ಪಾದಿತ ಎಣ್ಣೆಯು ವಾಸನೆ ಹಾಗೂ ಬಣ್ಣವನ್ನು ಹೊಂದಿ ಕಳಪೆ ಗುಣಮಟ್ಟದ್ದಾಗಿದ್ದು, ಅದರಿಂದ ಕಳಪೆ ಗುಣಮಟ್ಟದ ಸಾಬೂನು ಉತ್ಪಾದನೆಗೊಂಡು ಕೈಗಾರಿಕಾ ಮಟ್ಟದ ಅಳವಡಿಕೆಗೆ ಮಾತ್ರ ವಿನಿಯೋಗಿಸಲ್ಪಡುತ್ತದೆ. ಎಣ್ಣೆ ಬೇರ್ಪಡಿಕೆಯ ನಂತರದ ಒಣ ಕೋಶವನ್ನು ಕೋಳಿ ಹಾಗೂ ಮೀನು ಸಾಕಣೆಯಲ್ಲಿ ಆಹಾರೋತ್ಪಾದನೆಗಾಗಿ ಬಳಸಲಾಗುತ್ತದೆ. ಪಾರ್ಚ್‌ಮೆಂಟ್ ಪೊರೆಯನ್ನು ಕೋಶದಿಂದ ಬೇರ್ಪಡಿಸಿ “ಬಿಸು-ರೇಷ್ಮೆ” ಯಲ್ಲಿ ಕೋಶದ ಪೊರೆ ಹಾಗೂ ಕೋಶದ ಉಳಿಕೆ ಭಾಗಗಳು ಒಳಗೊಂಡಿರುತ್ತವೆ. ಇಂತಹ ಬಿಸು ರೇಷ್ಮೆಯಿಂದ ಸ್ಪನ್, ಜೂಟೆ ಮುಂತಾದ ರೇಷ್ಮೆದಾರದ ಉತ್ಪಾದನೆಯಾಗುತ್ತದೆ. == ಕೋಶದ ಉಪಯುಕ್ತತೆ == ರೇಷ್ಮೆ ಉತ್ಪಾದನೆಯ ಮುಂಚೂಣಿಯಲ್ಲಿರುವ ಚೈನಾ ದೇಶದಲ್ಲಿ ರೇಷ್ಮೆ ಹುಳುವಿನ ಕೋಶವನ್ನು ಆಹಾರ ಹಾಗೂ ಔಷಧಿ ಸಂಬಂಧಿತ ಪದಾರ್ಥಗಳ ಉತ್ಪಾದನೆಗಾಗಿ ಬಹು ಸಮರ್ಥವಾಗಿ ಬಳಸಲಾಗುತ್ತಿದೆ. ರೇಷ್ಮೆ ಹುಳು ಕೋಶದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಅಧಿಕ ಪ್ರಮಾಣದಲ್ಲಿದ್ದುದರ ಹಿನ್ನೆಲೆಯಲ್ಲಿ ಇದರ ಅಳವಡಿಕೆಯಿಂದ ಬೃಹತ್ ಪ್ರಮಾಣದಲ್ಲಿ ಅಮೈನೋ ಆಮ್ಲಗಳನ್ನು ಉತ್ಪಾದಿಸಿ, ಸೋಯಾ ಅವರೆ, ಜಿಲಟಿನ್ ಮುಂತಾದ ಅಧಿಕ ಬೆಲೆಯ ಪದಾರ್ಥಗಳಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆಯಿದೆ. == ಕೋಶದೆಣ್ಣೆ == ಕೋಶದೆಣ್ಣೆಯ ಉತ್ಪಾದನೆಗೆ ಯಾಂತ್ರಿಕ ವಿಧಾನದಲ್ಲಿ ಒತ್ತಡ ಪೂರಕ ವ್ಯವಸ್ಥೆಯನ್ನಳವಡಿಸಲಾಗುತ್ತಿದೆ. ಪರ್ಯಾಯವಾಗಿ ಸಾವಯವ ರಾಸಾಯನಿಕಗಳನ್ನು ಬಳಸಿ ಎಣ್ಣೆಯನ್ನು ಕರಗಿಸಿ ಬೇರ್ಪಡಿಕೆ ವಿಧಾನವನ್ನಳವಡಿಸಲಾಗುತ್ತದೆ. ಅಳವಡಿಸಲಾದ ವಿವಿಧ ವಿಧಾನಗಳು ಹಾಗೂ ಅವುಗಳ ವೈಜ್ಞಾನಿಕ ಉತ್ಕೃಷ್ಟತೆಗಳನ್ನವಲಂಬಿಸಿ, ಎಣ್ಣೆಯ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅದಕ್ಕನುಗುಣವಾಗಿ ಕೋಶದೆಣ್ಣೆಗೆ ಹಲವು ಉಪಯುಕ್ತತೆಗಳನ್ನು ಗುರುತಿಸಲಾಗಿದ್ದು, ಪ್ರಮುಖವಾದುವೆಂದರೆ: ಪಾಮಿಟಿಕ್ ಮತ್ತು ಸ್ಟಿಯರಿಕ್ ಆಮ್ಲ 24%, ಓಲಿಯಿಕ್ ಆಮ್ಲ 35%, ಲಿನೋಲಿಯಿಕ್ ಆಮ್ಲ 12%, ಮತ್ತು ಲಿನೋಲಿನಿಕ್ ಆಮ್ಲ 25% ಗಳನ್ನು ಹೊಂದಿದ ಎಣ್ಣೆಯನ್ನು ಕೈಗಾರಿಕಾ ಬಳಕೆಗಾಗಿನ ಸಾಬೂನು ತಯಾರಿಕೆಗೆ ಬಳಸಬಹುದು. ಲಿನ್‌ಸೀಡ್ (ಅಗಸೆ) ಎಣ್ಣೆ ಹಾಗೂ ಕೋಶದೆಣ್ಣೆಗಳನ್ನು 3:1 ಪ್ರಮಾಣದಲ್ಲಿ ಪೇಂಟ್ ಹಾಗೂ ವಾರ್ನಿಶ್ ತಯಾರಿಕೆಗೆ ಬಳಸಬಹುದು. ಕೋಶದೆಣ್ಣೆಯಲ್ಲಿ ಲಿನೋಲಿಕ್ ಹಾಗೂ ಔಲಿಕ್ ಆಮ್ಲಗಳಿರುವುದರಿಂದ, ಕೊಲೆಸ್ಟ್ರಾಲ್ ಸಂಬಂಧಿತ ರಕ್ತದೊತ್ತಡ ನಿವಾರಣೆಗೆ ಬಳಕೆ ಸಾಧ್ಯತೆ ಇದೆ. ಕೋಶದೆಣ್ಣೆಯ ಶುದ್ಧೀಕರಣದ ನಂತರ ದೊರಕುವ ಬಿಳಿ ಕೊಬ್ಬು ಉತ್ತಮ ಗುಣಮಟ್ಟದ ಸಾಬೂನು ಹಾಗೂ ಮೇಣ ಬತ್ತಿ ತಯಾರಿಕೆಗೆ ಉತ್ತಮ ಕಚ್ಚಾ ಸಾಮಗ್ರಿ. == ವ್ಯರ್ಥ ರೇಷ್ಮೆ ಅಳವಡಿಕೆ : ಉಪಯುಕ್ತತೆ == ಜಪಾನ್ ತಜ್ಞರ ಪ್ರಕಾರ ವ್ಯರ್ಥ ರೇಷ್ಮೆಯ ಫೈಬ್ರೊಯಿನ್‌ನ ಹಲವು ಉಪಯುಕ್ತ ಗುಣಧರ್ಮಗಳನ್ನು ಅನುಕೂಲಕರವಾಗಿ ಅಳವಡಿಸಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ: ರೇಷ್ಮೆ ಪಾನೀಯ ರೇಷ್ಮೆ ಸ್ಪ್ರೇ ಜೆಲ್-ಜಾಮ್ ಇತ್ಯಾದಿ ಪ್ರಸಾಧನ ಸಾಮಗ್ರಿಗಳಿಗಾಗಿ ಪೌಡರ್-ಪಾಲಿಶ್ ಪದಾರ್ಥಗಳು ಕೃತಕ ರಕ್ತನಾಳ, ಕಣ್ಣು ಪೊರೆ, ಚರ್ಮ ಇತ್ಯಾದಿ ಫೈಬ್ರಸ್ ರೇಷ್ಮೆ ದಾರ ಅಥವಾ ಮರು ಉತ್ಪಾದಿತ ರೇಷ್ಮೆದಾರ == ರೇಷ್ಮೆ ಆಧಾರಿತ ಆಹಾರ ಉತ್ಪನ್ನಗಳು == ಜಪಾನ್ ದೇಶದ ತಜ್ಞರಿಂದ ಲಭ್ಯ ಮಾಹಿತಿಯ ಪ್ರಕಾರ ರೇಷ್ಮೆ ಫೈಬ್ರೋಯಿನ್ ದಾರದಲ್ಲಿ ಪ್ರಾಣಿ ಆಹಾರಕ್ಕೆ ಅವಶ್ಯಕ ಅಮೈನೋ ಆಮ್ಲಗಳು ಅಧಿಕ ಪ್ರಮಾಣದಲ್ಲಿ ಉತ್ಕೃಷ್ಟ ಗುಣಮಟ್ಟದಲ್ಲಿ ಲಭ್ಯವಿದ್ದುದರ ಹಿನ್ನೆಲೆಯಲ್ಲಿ ಹಲವು ಬಗೆಯ ಆಹಾರ ಬಳಕೆಯ ಉಪಯುಕ್ತತೆಗಳನ್ನು ಕಾಣಬಹುದಾಗಿದೆ. ರೇಷ್ಮೆಯಲ್ಲಿ 18 ಅಮೈನೋ ಆಮ್ಲಗಳನ್ನು ಹೊಂದಿದ ಪ್ರೋಟೀನ್ ಲಭ್ಯವಿದ್ದು ಅವುಗಳ ಶೇಕಡಾ 85ರಷ್ಟು ಅವಶ್ಯಕ ಅಮೈನೋ ಆಮ್ಲಗಳಾದ , , ಹಾಗೂ ಗಳನ್ನೊಳಗೊಂಡಿರುತ್ತವೆ. ಇದರಿಂದಾಗಿ ಇದನ್ನು ಬಹು ಉಪಯೋಗಿ ಆಹಾರ ಪದಾರ್ಥಗಳಾದ ಜಾಮ್, ಜೆಲ್ಲಿ, ಪಾನೀಯ, ಪೌಡರ್ ಮುಂತಾದವುಗಳನ್ನು ಉತ್ಪಾದಿಸಬಹುದಾಗಿದೆ. == ರೇಷ್ಮೆ ಪೌಡರ್ == ವ್ಯರ್ಥ ರೇಷ್ಮೆ ಗೂಡು, ಬಿಸು ರೇಷ್ಮೆ, ಹಿಂಜು-ವ್ಯರ್ಥ ರೇಷ್ಮೆಗಳ ಬಳಕೆಯಿಂದ ರೇಷ್ಮೆ ಪೌಡರ್‌ನ್ನು ಉತ್ಪಾದಿಸಬಹುದು. ರೇಷ್ಮೆಯು ಕಿರಣಸಂಬಂಧಿತ ಹಲವು ಅಪೇಕ್ಷಿತ ಗುಣ ಧರ್ಮಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಜೊತೆಗೆ ರೇಷ್ಮೆ ಪೌಡರು ಛಿದ್ರಿತ ಭೌತಿಕ ಗುಣ ಧರ್ಮಗಳನ್ನು ಹೊಂದಿದ್ದು, ಅಧಿಕ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ ಅದನ್ನು ಪ್ರಸಾದನ ಸಂಬಂಧಿತ ಹಲವು ಪೌಡರ್, ಕ್ರೀಂ ಇತ್ಯಾದಿ ಪದಾರ್ಥಗಳ ತಯಾರಿಕೆಗೆ ಬಳಸಬಹುದು. ಇದರೊಂದಿಗೆ ಔಷಧೀಯ ಪದಾರ್ಥ ರಾಸಾಯನಿಕಗಳನ್ನಳವಡಿಸಿ ಹಲವು ಔಷಧೀಯ ಪದಾರ್ಥಗಳನ್ನು ತಯಾರಿಸಬಹುದು. ಇಂತಹ ಹಲವು ಪದಾರ್ಥಗಳು ಚೈನಾದಲ್ಲಿ ಅಧಿಕ ಪ್ರಮಾಣದ ಬಳಕೆಯನ್ನು ಕಂಡಿದೆ. == ರೇಷ್ಮೆ-ಪೊರೆ == ರೇಷ್ಮೆಯಿಂದ ಉತ್ಪಾದಿತ ಪೊರೆಯು ನೀರು ಹಾಗೂ ಆಮ್ಲಜನಕಗಳೆರಡಕ್ಕೂ ಒಳ್ಳೆಯ ವಾಹಕ ಗುಣಗಳನ್ನು ಹೊಂದಿದ್ದು ಅದನ್ನು ಕೃತಕ ಚರ್ಮ, ಕಣ್ಣು ಪೊರೆ, ರಕ್ತನಾಳಗಳ ತಯಾರಿಕೆಗೆ ಅಳವಡಿಸಲಾಗುತ್ತದೆ. ಅದೇ ರೀತಿ ಇದನ್ನು ಕೃತಕ ಎಲುಬು, ಜೈವಿಕ ಕ್ಷೀಣಪೂರಕ ಪ್ಲಾಸ್ಟಿಕ್ ಸಾಮಗ್ರಿಗಳ ತಯಾರಿಕೆಗೂ ಬಳಸಬಹುದಾಗಿದೆ. == ರೇಷ್ಮೆ ಉಪ-ಉತ್ಪನ್ನಗಳಿಂದ ಕರಕುಶಲ ವಸ್ತುಗಳ ತಯಾರಿಕೆ == ಕರಕುಶಲ ವಸ್ತುಗಳ ತಯಾರಿಕೆಗೆ ಇಂತಹುದೇ ವಸ್ತು ಪದಾರ್ಥಗಳು ಬೇಕೆಂಬುದಿಲ್ಲ. ಇಂತಹುದೇ ಪ್ರಯತ್ನಗಳನ್ನು ವ್ಯರ್ಥ ರೇಷ್ಮೆ ಗೂಡಿನ ಕವಚ, ನೂಲು ಇತ್ಯಾದಿ ಪದಾರ್ಥಗಳಿಂದ ಆಕರ್ಷಕ ಮಾಲೆಗಳು, ಗೊಂಬೆಗಳು, ಶುಭಾಶಯ ಪತ್ರಗಳನ್ನು ತಯಾರಿಸಬಹುದಾಗಿದೆ. ಈ ರೀತಿಯ ಹವ್ಯಾಸವನ್ನು ಅಳವಡಿಸಿಕೊಂಡು ಬಿಡುವಿನ ವೇಳೆಯಲ್ಲಿ ಅಲ್ಪ-ಸ್ವಲ್ಪ ಶ್ರಮವಹಿಸಿ ಹೆಚ್ಚುವರಿ ಆದಾಯವನ್ನು ಪಡೆಯಬಹುದು. ಇಂತಹ ಕರಕುಶಲ ಕೆಲಸಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳೆಂದರೆ: ಕತ್ತರಿಸಿದ ಅಥವಾ ಚಿಟ್ಟೆ ಕೊರೆದ ಗೂಡಿನ ಕವಚಗಳು. ಗೂಡುಗಳು ಚೌಳಾದ ಪೊರೆ. ನೂಲು ಬಿಚ್ಚಾಣಿಕೆಯಲ್ಲಿ ಒದಗುವ ವ್ಯರ್ಥ ರೇಷ್ಮೆ. ಬಟ್ಟೆ ನೇಯ್ಗೆಯಲ್ಲಿ ಒದಗುವ ವ್ಯರ್ಥ ರೇಷ್ಮೆ, ಮತ್ತು ಪೂರಕ ಸಾಮಗ್ರಿಗಳಾದ ಕಾರ್ಡ್ ಶೀಟ್ ಕಾಗದ, ಟೇಲರಿಂಗ್‌ನಲ್ಲಿ ಒದಗುವ ಬಣ್ಣ, ಬಣ್ಣದ ಬಟ್ಟೆ ತುಂಡುಗಳು, ಬಣ್ಣಗಳು ಇತ್ಯಾದಿ. ಅಂತೆಯೇ ಇದಕ್ಕೆ ಬೇಕಿರುವ ಸಾಮಾನ್ಯ ಸಲಕರಣೆಗಳೆಂದರೆ: ಟ್ರೇಸಿಂಗ್ ಪೇಪರ್, ಸ್ಕೆಚ್ ಪೆನ್, ಫೆವಿಕಾಲ್ ಕತ್ತರಿ, ಬ್ಲೇಡು, ಸೂಜಿ ಮತ್ತು ಅಲಂಕಾರಿಕ ಸ್ಟಿಕರ್ಸ್, ಚಮಕಿ, ಮಿಂಚು, ಮಿಂಚುಹಾಳೆ ಇತ್ಯಾದಿ. ಗೂಡು ಕವಚಕ್ಕೆ ಬಣ್ಣ ಹಾಕುವುದು ಗೂಡು ಕವಚಗಳನ್ನು ಚೌಳು ಪೊರೆಯಿಂದ ಬೇರ್ಪಡಿಸಿ, ಒಳಭಾಗವನ್ನು ಶುಚಿಗೊಳಿಸಿ. 5 ಗ್ರಾಂ ಬಣ್ಣವನ್ನು ಅರ್ಧ ಲೀಟರ್ ನೀರಿನಲ್ಲಿ ಬೆರೆಸಿ 60-700C ನ ಶಾಖದಲ್ಲಿ ಕರಗಿಸಿ. ಕತ್ತರಿಸಿದ ಶುಚಿಗೊಳಿಸಿದ ಗೂಡು ಕವಚಗಳನ್ನು ಕರಗಿಸಿದ ಬಣ್ಣದಲ್ಲಿ 3-4 ನಿಮಿಷ ಅದ್ದಿ. ಗೂಡು ಕವಚಗಳನ್ನು ಬಣ್ಣದ ದ್ರಾವಕದಿಂದ ಹೊರತೆಗೆದು ನೆರಳಲ್ಲಿ ಒಣಗಿಸಿ. ಬಣ್ಣದ ಕವಚಗಳನ್ನು ಅವಶ್ಯಕತೆಗೆ ತಕ್ಕಂತೆ ಜಿಗ್‌ಜಾಗ್ ಕತ್ತರಿ ಅಥವಾ ಸಾಮಾನ್ಯ ಕತ್ತರಿಯಿಂದ ನೀಟಾಗಿ ಕತ್ತಿರಿಸಿ, ಇಲ್ಲವೆ ತುಂಡರಿಸಿ. ತಯಾರಿಸಬಹುದಾದ ಹಲವಾರು ಕರಕುಶಲ ವಸ್ತುಗಳೆಂದರೆ: ರೇಷ್ಮೆ ಗೂಡುಗಳಿಂದ ತಯಾರಿಸಬಹುದಾದ ಮಾಲೆ (ಹಾರ), ಹೂವು, ಹೂಗುಚ್ಛ, ಗೊಂಬೆಗಳು ಇತ್ಯಾದಿ. ರೇಷ್ಮೆಯಿಂದ ತಯಾರಿಸಬಹುದಾದ ಗೋಡೆಗೆ ನೇತು ಹಾಕಬಹುದಾದ ಕಾರ್ಪೆಟ್ ಇತ್ಯಾದಿ ಹಣದ ಪರ್ಸ್, ಕರವಸ್ರಗಳನ್ನು ಕಸೂತಿಯಿಂದ ವೈವಿಧ್ಯತೆ ಹಾಗೂ ಅಲಂಕಾರವನ್ನು ಹಚ್ಚಿಸುವುದು. ಗೂಡು ಮತ್ತು ರೇಷ್ಮೆಯಿಂದ ಅಭಿನಂದನಾ ಪತ್ರಗಳು. == ಉಲ್ಲೇಖಗಳು ==